ಈಲಿನ್ - ಪೆಲಿನ್
1878-1949. ಡಿಮಿಟ್ರಿ ಈವನಫ್ ಎನ್ನುವ ಬಲ್ಗೇರಿಯದ ಸಾಹಿತಿಯ ಕಾವ್ಯನಾಮ. ಈತ ಸಣ್ಣ ಕಥೆಗಾರ, ಕಾದಂಬರಿಕಾರ. ತನ್ನ ಕಡೆಯ ವರ್ಷಗಳಲ್ಲಿ ಸೊಗಸಾದ ಶಿಶುಸಾಹಿತ್ಯವನ್ನೂ ರಚಿಸಿದ. ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬಹು ವರ್ಷಗಳ ಕಾಲ ಉಪಾಧ್ಯಾಯನಾಗಿದ್ದ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಪ್ರಕಟವಾದ ಈತನ ಸಣ್ಣ ಕಥೆಗಳು ಶೀಘ್ರ ಯಶಸ್ಸನ್ನು ಗಳಿಸಿದುವು. ತನ್ನ ವಿದ್ಯಾರ್ಥಿಗಳಿಗೆ ಮತ್ತು ಸ್ನೇಹಿತರಿಗೆ ತಾನು ಕಥೆಗಳನ್ನು ಬರೆಯುವುದು ತಿಳಿಯಬಾರದೆಂದು ಕಾವ್ಯನಾಮವನ್ನು ಬಳಸಿದ. ಬಲ್ಗೇರಿಯದ ಅತ್ಯಂತ ಹಿರಿಯ ಸಾಹಿತಿ ಎನ್ನಿಸಿಕೊಂಡಿದ್ದ ಈವನ್ ವಜಫನ ನಿಧನದ ಅನಂತರ ಈಲಿನ್-ಪೆಲಿನಿಗೆ ಆ ಗೌರವ ಸಂದಿತು. ಇವನು ಸಣ್ಣ ಕಥೆಯ ಮಾಧ್ಯಮವನ್ನು ಅಸಾಧಾರಣ ಯಶಸ್ಸಿನಿಂದ ಬಳಸಿಕೊಂಡ. ಸಾಮಾನ್ಯ ರೈತರ ಜೀವನವನ್ನು ಈತ ವರ್ಣಿಸುತ್ತಾನೆ. ಅವರಲ್ಲಿ ಇವನಿಗಿರುವ ನೈಜವಾದ ಪ್ರೀತಿ, ಅಭಿಮಾನಗಳಿಂದ ಪಾತ್ರಗಳು ಜೀವಂತವಾಗುತ್ತವೆ. ಕಥೆಗಳಲ್ಲಿ ಹರಿತವಾದ ಕಟಕಿಯನ್ನೂ ಈತ ಬಳಸಬಲ್ಲ. ಭೂಮಿ (1928) ಎನ್ನುವ ಕಾದಂಬರಿಯನ್ನು ಬರೆಯಲು ಇಪ್ಪತ್ತೈದು ವರ್ಷಗಳ ಕಾಲ ಶ್ರಮಿಸಿದ. ಇದರಲ್ಲಿ ರೈತನ ಮನೋಧರ್ಮದ ಸುಂದರ ವಿಶ್ಲೇಷಣೆ ಇದೆ. ನೀತಿಬೋಧೆ ಮತ್ತು ಸಮಾಜಸುಧಾರಣೆಯ ಬಯಕೆಗಳಿಗೆ ಕಲೆ ಸಾಧನವಾಗುವುದನ್ನು ವಿರೋಧಿಸಿದ ಸಾಹಿತಿಗಳ ಗುಂಪಿಗೆ ಸೇರಿದವನೀತ. ಇವನ ಶೈಲಿ ಸರಳವೂ ಲಲಿತವೂ ಆದುದು.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ